Wednesday, 9 March 2011

ನನ್ನ(ನ್ನು) 'ಹೆಸರನ್ನು' ನಾನು ಇಷ್ಟ ಪಟ್ಟಿದ್ದು.......!!


ಕವನ ಇದೆಂತ ಹೆಸರು..... ?
ಮೊದಲು ತುಂಬಾ ಸಾರಿ ಹೀಗನ್ನಿಸುತ್ತಿತ್ತು. ಆದ್ದರಿಂದ ಎಷ್ಟೋದಿನಗಳ ವರೆಗೆ ನನ್ನ ಹೆಸರನ್ನು ನಾನು ಪ್ರೀತಿಸಿಯೇ ಇರಲಿಲ್ಲ. ಆದರೆ ಇವತ್ತು! ಎಲ್ಲೋ ನನಗೆ ಗೊತ್ತಿಲ್ಲದೇನೆ, ನನ್ನ ಅರಿವಿಗೂ ಬಾರದೇನೆ ನನಗೆ ನನ್ನ ಹೆಸರು ಪ್ರೀಯವಾಗುತ್ತಿದೆ. ಈ ಇಷ್ಟ ಪಡದೆ ಇರುವುದಕ್ಕೂ, ಇಷ್ಟವಾಗುತ್ತಿರುವುದಕ್ಕೂ ನಾನೇ ಕಾರಣ!
ನನಗೆ ಸ್ವಲ್ಪ ತಿಳಿವಳಿಕೆ ಬಂದ ತಕ್ಷಣ  ನನ್ನಲ್ಲಿ ಮೂಡಿದ ಮೊದಲ ಪ್ರಶ್ನೆಯೇ 'ನನ್ನ ಹೆಸರು ಹೀಗೇಕೇ?' ಅಂತ. ಅದಕ್ಕೂ ಕಾರಣ ಇದೆ. ನನ್ನ ಸ್ಕೂಲ್ ನಲ್ಲಿ ನಾನು ಒಬ್ಬಂಟಿ. ಅಂದರೆ, ನನ್ನ ಹೆಸರಿನವರು ಇನ್ನೊಬ್ಬರು ಇರಲೇ ಇಲ್ಲ. ಇಡೀ ಸ್ಕೂಲ್ ಗೆ 'ಕವನ' ಅಂದರೆ ನಾನೊಬ್ಬಳೆ. ನನ್ನ ಗೆಳತಿ ಸುಮ, ಅವಳ ಹೆಸರಿನವರು ನಾಲ್ಕೈದು ಜನ ಇದ್ದರು. ಛೆ! ನಾನೆಷ್ಟು ಒಬ್ಬಂಟಿ ಅಲ್ವ?! ಅದೊಂದು ದಿನ ಇದೇ ವಿಷಯಕ್ಕೆ ತುಂಬಾ ಕೋಪ. ಮನೆಯಲ್ಲಿ ಗಲಾಟೆ ಮಾಡಿದ್ದೆ. ನನಗೆ ಈ ಹೆಸರಿಟ್ಟವರು ಯಾರು ಅಂತ?!

ಅವರ್ಯಾರು ಅಂತೀರ...!! ನಮ್ಮಪ್ಪ. 'ಕ' ದಿಂದ ಯಾವುದೇ ಹೆಸರಿಟ್ಟರೂ ಮಗುವಿನ ಬಾಳು ಬಂಗಾರವಾಗುತ್ತದೆ ಅಂತ ಯಾವುದೋ ಜ್ಯೋತಿಷಿ ಹೇಳಿದ್ದರಂತೆ. ಆದರೂ
ಕವಿತಾ ಅಂತ ಇಡಬಹುದಿತ್ತಲ್ಲ. ನಮ್ಮ ಸ್ಕೂಲಿನಲ್ಲಿ ಕವಿತಾ ಅನ್ನೊ ಹೆಸರಿನವರು ಎರಡು ಮೂರು ಮಂದಿ ಇದ್ದರು. ಅದರಲ್ಲೂ ಏಳನೇ ಕ್ಲಾಸಿನ ಕವಿತಕ್ಕ ಎಷ್ಟು ಚೆಂದ ಇದಾಳೆ. ಎಷ್ಟು ಚೆನ್ನಾಗಿ ಹಾಡು ಹೇಳುತ್ತಾಳೆ. ವಾವ್! ಅವಳ ಹೆಸರೇ ನನಗಿಟ್ಟಿದ್ದರೆ! ಹಾಗಾಗಲಿಲ್ಲ. ನಮ್ಮ ಸ್ಕೂಲಿನಲ್ಲಿ ಯಾವುದೇ ಹುಡುಗರೂ ನನಗೆ ಕವನ ಅಂತ ಕರಿತಾನೇ ಇರಲಿಲ್ಲ. 'ಕಥೆ ಕವನ' ಅಂತ ಕರೆದು ರೇಗಿಸೋರು. ಆಗೆಲ್ಲ ಅಪ್ಪನ ಮೇಲೆ ಕೋಪ ಜಾಸ್ತಿಯಾಗುತ್ತಿತ್ತು. (ಹುಡುಗರು ಹೀಗೆಲ್ಲಾ ರೇಗಿಸಿದ್ರೆ ಹೇಗೆ ಹೇಳಿ! ಕೋಪ ಬರಲ್ವೇ?) ಆದರೆ ಅಪ್ಪ ಅಪ್ಪನೇ... ಅವರಿಗೆ ಸರಿಸಾಟಿ ಯಾರೂ ಇಲ್ಲ. ನಮ್ಮಪ್ಪ ಓದಿದ್ದು ಬಿಎ. ಹಿಸ್ಟರಿ ಮುಖ್ಯ ವಿಷಯ. ಜೊತೆಗೆ ಅಲ್ಲಿ ಇಲ್ಲಿ ಸ್ವಲ್ಪ ಸಂಸ್ಕೃತ ಕಲಿತವರು. 'ದೇಶ ಸುತ್ತು ಕೋಶ ಓದು' ಅಂತ ಒಂದು ಮಾತಿದೆಯಲ್ಲ ಅದು ಅಪ್ಪನಿಗೆ ಸರಿಯಾಗಿ ಹೊಂದಿಕೆಯಾಗುತ್ತೆ. 'ಅಂತವರು ಮಗಳಿಗೆ ಕವನ ಅಂತ ಅದ್ಭುತ ಹೆಸರಿಡುವುದು ವಿಶೇಷ ಏನಲ್ಲ' ಹೀಗಂತ ಮೊದಲ ಸಾರಿ ಅನ್ನಿಸಿದ್ದು ನಾನು ಹತ್ತನೇ ತರಗತಿಯಲ್ಲಿದ್ದಾಗ. ಆಗ ಸ್ವಲ್ಪ ಪ್ರಭುದ್ದೆ ಆಗಿದ್ದೆನಾ? ಅಪ್ಪನನ್ನು ಕೇಳಿದರೆ 'ಹೌದು' ಅಂತಾರೆ.

ಅಲ್ಲಿಯವರೆಗೂ ನನಗೆ ನನ್ನ ಹೆಸರಿನ ಮೇಲೆ ಧ್ವೇಶ, ಅಪ್ಪನ ಮೇಲೆ ಚಿಕ್ಕ ಅಸಹನೆ ಇದ್ದೇ ಇತ್ತು. 'ಅವರ ಹೆಸರನ್ನು ಅವರೇ ಇಟ್ಟುಕೊಳ್ಳಬೇಕು. ಅವರಿಗೆ ಇಷ್ಟವಾಗಿದ್ದು. ಅಪ್ಪ ಅಮ್ಮ ಯಾಕೆ ಇಡಬೇಕು?' ದಿನವೂ ನನ್ನ ವಾದ ನಡೆಯುತ್ತಲೇ ಇತ್ತು. 'ಇಷ್ಟು ಚೆಂದದ ಹೆಸರು. ನಿನಗ್ಯಾಕೆ ಇಷ್ಟ ಆಗಲ್ವೋ ಏನೋ. ಕೆಂಪಮ್ಮ ಅಂತ ಇಟ್ಕೊ. ನಮ್ಮನೆಗೆ ಕೆಲಸಕ್ಕೆ ಬರ್ತಾಳಲ್ಲ ಅವಳ ಹೆಸರು ಸರಿಯಾಗಿರುತ್ತೆ' ನನ್ನ ಅತ್ತೆ (ಅಪ್ಪನ ತಂಗಿ) ಯಾವಾಗಲೂ ರೇಗಿಸೋರು. ಹೆಸರಿನ ಚೆಂದಕ್ಕಿಂತ, ಸ್ಕೂಲಿನಲ್ಲಿ ಹುಡುಗರು ರೇಗಿಸೋದೆ ದೊಡ್ಡ ವಿಷಯ ಎನಿಸುತ್ತಿತ್ತು ನನಗೆ. ಆ ಕೋಪದ ಮಧ್ಯೆ ಅತ್ತೆಯ ಗೊಣಗಾಟ. ಕೋಪ ನೆತ್ತಿಗೇರಿದರೆ ಮುಖವೆಲ್ಲಾ ರಕ್ತಗೆಂಪು. ಹೌದು ಕೆಂಪಮ್ಮನೆ...?!! ಅತ್ತೆ ಹೇಳೋದು ಸರಿನೆ. ಅತ್ತೆ, ನಮ್ಮಪ್ಪನ ಮುದ್ದಿನ ತಂಗಿ. ಅಣ್ಣ ಏನೇ ಮಾಡಿದರೂ ಅದು 'ಸರಿ' ಯಾಗಿರುತ್ತೆ ಅಂತ ನಂಬೋರು. ಈಗ ಅನ್ನಿಸುತ್ತೆ ಅತ್ತೆಯ ನಂಬಿಕೆ ಎಷ್ಟು ಸರಿಯಾಗಿದೆ ಅಂತ.

ಹತ್ತನೇ ತರಗತಿಯ ನಂತರ, ಹೆಸರಿನ ಮೇಲಿನ ದ್ವೇಶ, ಅಪ್ಪನ ಮೇಲಿನ ಅಸಹನೆ ಎರಡು ಕಡಿಮೆಯಾಗಿತ್ತು. ಆದರೆ ಚಿಕ್ಕಂದಿನಿಂದ ಇಲ್ಲಿಯವರೆಗೂ ನನ್ನ ಹೆಸರಿನವರು ಇನ್ನೊಬ್ಬರು ನನಗೆ ಸಿಗಲೇ ಇಲ್ಲ. ಅದೊಂದು ಚಿಕ್ಕ ನೋವಿದೆ! ಇಲ್ಲ, ಇತ್ತೀಚೆಗೆ ಅದು ನೋವು ಅನಿಸುತ್ತಿಲ್ಲ. ಕಾಲೇಜಿನಲ್ಲಿ ಕ್ಲಾಸ್ ಗೆ ಫಸ್ಟ್ ಬಂದಾಗ, ಭಾಷಣ ಸ್ಪರ್ಧೆಯಲ್ಲಿ ನನ್ನ ಮೀರಿಸುವವರೇ ಇಲ್ಲದಾಗ, ಊರಿನವರ, ಸಂಬಂಧಿಕರ, ಸ್ನೇಹಿತರ ಅಚ್ಚುಮೆಚ್ಚಾದಾಗ, ಅಪ್ಪ ಅಮ್ಮ ತಮ್ಮ ತಂಗಿಯ ಅಷ್ಟೂ ಪ್ರೀತಿ ನನ್ನದಾದಾಗ (ಅತ್ತೆಯನ್ನು ಕೇಳಿದರೆ ಅಣ್ಣನ 50% ಪ್ರೀತಿ ನನಗೆ ಇನ್ನು 50% ನಿನಗೆ ಅಂತಾರೆ ಬಿಡಿ..!) ಈ ಎಲ್ಲ ಸಂತೋಷದ ಮಧ್ಯೆ ಯಾವಾಗ 'ಕವನ' ನನಗೆ ಇಷ್ಟ ಆದ್ಲೋ ಗೊತ್ತಾಗಲೇ ಇಲ್ಲ....!!!
ಈ ಇಷ್ಟ ಪ್ರೀತಿಯಾಗಿ ಬದಲಾಗಿದ್ದು ಮಾತ್ರ ಮೊನ್ನೆ ಮೊನ್ನೆ. ನಾನು ಕೆಲಸ ಮಾಡುವ ಕಂಪನಿಯವರು 'best newcomer' ಅವಾರ್ಡ್ ನನಗೆ ಕೊಟ್ಟಾಗ. ಎಲ್ಲರೂ ಬಾಯ್ತುಂಬ ಹೊಗಳಿದಾಗ. ನನಗೆ i am the best ಅನ್ನಿಸುದ್ದು ಆಗಲೇ. ಆಗ ಸಂಪೂರ್ಣ ನನ್ನ ಹೆಸರು ನನಗೆ ಇಷ್ಟ ಆಯ್ತು. ಅಂದರೆ ನನ್ನನ್ನು ನಾನು ಸಂಪೂರ್ಣ ಇಷ್ಟ ಪಟ್ಟೆ.
ನಿಜ. ಹೆಸರು ಅನ್ನೋದು ನಮ್ಮ ಅಸ್ಥಿತ್ವ. ನಾವು ನಮ್ಮನ್ನು ಇಷ್ಟ ಪಡೋಕೆ ಪ್ರಾರಂಭಿಸೋದೇ ಹೆಸರಿನಿಂದ. ಕೊಲೇಜ್ ಗೆ ಫಸ್ಟ್ ಬಂದಾಗ, ಸ್ಪೋಡ್ಸ್ ನಲ್ಲಿ ಗೆದ್ದಾಗ, job ಸಿಕ್ಕಿದಾಗ, ಪ್ರಮೋಶನ್ ಬಂದಾಗ, ಹೊರದೇಶಕ್ಕೆ ಹೋಗೋ ಅವಕಾಶ ಸಿಕ್ಕಾಗ ಎಲ್ಲ ಕಡೆ ನಿಮ್ಮನ್ನು ನೀವು ಗುರುತಿಸಿಕೊಳ್ಳೋದು ನಿಮ್ಮ ಹೆಸರಿನಿಂದ. ನಾಲ್ಕು ಜನ ನಿಮ್ಮ ಹೆಸರಿಡಿದು ಹೊಗಳಿದಾಗಲೇ ನಿಮಗೆ ನೀವು ಇಷ್ಟವಾಗುತ್ತೀರ. bf / gf ನಿಮ್ಮ ಹೆಸರನ್ನು ಪಿಸುಗುಟ್ಟಿದಾಗಲೇ ನಿಮಗೆ ನಿಮ್ಮ ಹೆಸರು ಎಷ್ಟು ಸ್ವೀಟ್ ಆಗಿದೆ ಅನ್ನಿಸುತ್ತದೆ. ಅಂದರೆ ನಿಮ್ಮನ್ನು ನೀವು ಇಷ್ಟ ಪಡಲು ಪ್ರಾರಂಭಿಸಿದ್ದೀರ ಎಂದರ್ಥ.
ಈಗಲೂ ನನ್ನ ಸ್ಕೂಲ್ ಸ್ನೇಹಿತರು ಎಲ್ಲೇ ಸಿಕ್ಕರೂ 'ಕಥೆ ಕವನ' ಅಂತಾನೇ ಕೂಗೋದು. ನನಗೆ ಕೋಪ ಬರಲ್ಲ ಮುಖದಲ್ಲೊಂದು ಮುಗುಳ್ನಗೆ ಮೂಡುತ್ತದೆ. ಎಷ್ಟು ವ್ಯತ್ಯಾಸ ಅಂದಿಗೂ, ಇಂದಿಗೂ...

ಓ ತುಂಬಾ ಹೇಳ್ಬಿಟ್ಟೆ ಅನ್ನಿಸ್ತಾ ಇದೆಯಾ? (ಪಿಟೀಲು ಕುಯ್ದೆ ಅಂತೀರ?) ಇಲ್ಲ, ಇಲ್ಲಿಗೆ ಸಾಕು. ಇನ್ನು ನೀವೆ ಯೋಚಿಸಿ, ನಿಮಗೆ ನಿಮ್ಮ ಹೆಸರು ಇಷ್ಟಾನ ಅಂತ? ಚಿಕ್ಕವರಿರುವಾಗ ಯಾವಾಗಲಾದರೂ ನನ್ನ ತರಹ, ಅಪ್ಪ ಅಮ್ಮನ ಜೊತೆ ಹೆಸರಿನ ವಿಷಯಕ್ಕೆ ಜಗಳ ಆಡಿದ್ದೀರ ಅಂತ? ನೀವು ಯೋಚಿಸುತ್ತಾ ಇರಿ, ಅಷ್ಟರಲ್ಲಿ ಅಪ್ಪನಿಗೊಂದು ಫೋನ್ ಮಾಡಿ 'thanks' ಹೇಳಿ ಬರುತ್ತೇನೆ. ನನಗೆ ಇಂತಹುದೊಂದು ಚೆಂದದ, ಅದ್ಭುತ ಹೆಸರಿಟ್ಟಿದ್ದಕ್ಕೆ!!

ಕವನ
i love 'my name' (myself !)